ಕೂಟಯೋಧರು 
	ಶತ್ರುಸೈನ್ಯಗಳಿಗೆ ಕಿರುಕುಳ ಕೊಟ್ಟು ಅಕ್ರಮ ಕಾಳಗಗಳಿಂದ ಅವರನ್ನು ಸದೆಬಡಿಯುವ ಸಾಹಸಿಗರು (ಸ್ನೈಪರ್ಸ್). ಹಸ್ತಕೌಶಲ ಶೀಘ್ರಗಾಮಿತ್ವ, ತಾವು ಕಾರ್ಯವೆಸಗುವ ವಲಯದ ನಿಕಟ ಪರಿಚಯ ಇವೆಲ್ಲವೂ ಕೂಟಯೋಧರಿಗೆ ಅತ್ಯಾವಶ್ಯಕ. ವೈರಿಗಳ ಚಲನವಲನಗಳನ್ನು ಗೂಢಚರ್ಯೆಯಿಂದ ಮೊದಲೇ ಅರಿತು ಆಯಕಟ್ಟಿನ ಭಾಗಗಳಿಗೆ ತೀವ್ರ ಘಾಸಿಯನ್ನು ಹಠಾತ್ತನೆ ಎಸಗಿ ವೈರಿಯ ಧೃತಿ ಕೆಡಿಸುವುದರಲ್ಲಿ ಕೂಟಯೋಧರದು ಎತ್ತಿದ ಕೈ. ಶತ್ರುವಿನ ಸರಪರಾಜುರೇಖೆ, ಸಂಪರ್ಕವ್ಯವಸ್ಥೆ, ಹಿಂಚೂಣಿಯ ಕೋಮಲ ಪ್ರದೇಶಗಳ ವಿರುದ್ಧ ಈ ಸಾಹಸಿಗರಿಗೆ ಸದಾ ಗೃಧ್ರದೃಷ್ಟಿ. ಕೂಟಯೋಧರು ಸಾಮಾನ್ಯವಾಗಿ ಕ್ರಮಬದ್ಧ ಶಿಕ್ಷಣಪಡೆದ ಸೈನಿಕರಲ್ಲ. ಆದರೆ ಇವರು ರಾಷ್ಟ್ರೀಯ ಸೈನ್ಯದ ಬೆಂಬಲ ಪಡೆಯಬಹುದು. 						
(ಎಂ.ಜಿ.ಕೆ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ